ರಾಶಿಚಕ್ರ
 ಖಗೋಳದಲ್ಲಿ ಕಾಂತಿವೃತ್ತದ (ಎಕ್ಲಿಪ್ಟಿಕ್) ಎರಡೂ ಪಾಶ್ರ್ವಗಳಲ್ಲೂ ಸುಮಾರು 80ಯಷ್ಟು ವ್ಯಾಪಿಸಿಕೊಂಡಿರುವ ಕಾಲ್ಪನಿಕ ಪಟ್ಟಿ (ಜೊಡಿಯಾಕ್). ಭೂಮಿ ತನ್ನ ಅಕ್ಷದ ಸುತ್ತ ಆವರ್ತಿಸುವುದು ಮಾತ್ರವಲ್ಲದೆ ಸೂರ್ಯನ ಸುತ್ತ ವರ್ಷಕ್ಕೊಮ್ಮೆ ಪರಿಭ್ರಮಿಸುತ್ತಲೂ ಇದೆ. ಈ ವಾರ್ಷಿಕ ಪರಿಭ್ರಮಣೆಯಲ್ಲಿ ಭೂಕೇಂದ್ರೀಯ ವೀಕ್ಷಕ ಪಾಲ್ಗೊಳ್ಳುತ್ತಾನೆ. ತತ್ಫಲವಾಗಿ ಅವನಿಗೆ ಸೂರ್ಯ ಹಾಗೂ ಚಂದ್ರ, ಗ್ರಹ ಮುಂತಾದ ಆಕಾಶಕಾಯಗಳ ಖಗೋಳೀಯ ಸ್ಥಾನಗಳು ಒಂದು ನಿರ್ದಿಷ್ಟ ಮಹಾವೃತ್ತದ ಮಾರ್ಗವಾಗಿ ವರ್ಷಕ್ಕೊಮ್ಮೆ ಪರಿಕ್ರಮಿಸುವಂತೆ ತೋರುವುದು. ಇದೇ ಕ್ರಾಂತಿವೃತ್ತ. ಭೂಕೇಂದ್ರಿಯ ಖಗೋಳದ ಉತ್ತರ ಮತ್ತು ದಕ್ಷಿಣ ಧ್ರುವಬಿಂದುಗಳನ್ನು ಉಳ್ಳ ಮಹಾವೃತ್ತವೇ ವಿಷುವದ್ವøತ್ತ (ಸೆಲಿಸ್ಟಿಯಲ್ ಈಕ್ವೇಟರ್) ಈ ವೃತ್ತ ಕ್ರಾಂತಿವೃತ್ತವನ್ನು ಸಂಧಿಸುವ ಸ್ಥಳದಿಂದ (ಮೇಷಬಿಂದು) ಕ್ರಾಂತಿವೃತ್ತದ 80 ಅಗಲದ ಪಟ್ಟಿಯನ್ನು ಹನ್ನೆರಡು ರಾಶಿಗಳಾಗಿ ವಿಂಗಡಿಸಿ ಒಂದೊಂದು ಭಾಗಕ್ಕೆ ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ಎಂಬ ರಾಶಿ ಹೆಸರುಗಳನ್ನು ನೀಡಿದೆ.	
		(ಸಿ.ಎನ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ